ಕೇರಳದ ಶಾಸನಗಳು

ಕೇರಳದಲ್ಲಿ ಕ್ರಿ.ಶ. 3ನೆಯ ಶತಮಾನದಷ್ಟು ಹಿಂದಿನಿಂದ 18ನೆಯ ಶತಮಾನದವರೆಗಿನ ದೀರ್ಘ ಅವಧಿಯಲ್ಲಿ ಹುಟ್ಟಿದ ಶಿಲಾ ಮತ್ತು ತಾಮ್ರ ಶಾಸನಗಳು ನೂರಾರು ದೊರೆತಿವೆಯಾದರೂ ಅವನ್ನು ಕುರಿತ ಸಂಶೋಧನೆ ಮತ್ತು ಅಧ್ಯಯನ ಸಾಕಷ್ಟು ಪ್ರಮಾಣದಲ್ಲಿ, ಕ್ರಮಬದ್ಧ ರೀತಿಯಲ್ಲಿ ನಡೆದಿಲ್ಲ. ಕೇರಳದ ಶಾಸನಗಳಲ್ಲಿ ಹೆಚ್ಚಿನವು ಬನವಾಸಿಯ ಕದಂಬ, ಅಯ್, ವೃಷ್ಟಿಕುಲ ಅಥವಾ ಯಾದವ, ಪಾಂಡ್ಯ, ಚೇರ, ಚೋಳ, ಮೂಷಕ ಅಥವಾ ಮೂಷಿಕ ಆಳುಪ, ವಿಜಯನಗರ, ವೇಣಾಡು, ಓನಾಡು ಅಥವಾ ಒಡನಾಡು, ಕೀವಿಪ್ಪೆರೂರ್, ಇಳಯಡ, ಕೋಲಂಬ, ಪರೂರ್, ನೇಟಿಯಿರುಪ್ಪು, ತಿರುವಾಂಕೂರು, ಕೊಚ್ಚಿ, ಮಧುರೆಯ ನಾಯಕ, ಮೈಸೂರು ಸುಲ್ತಾನ್, ರಾಮನಾಥಪುರದ ಸೇತುಪತಿ ಇತ್ಯಾದಿ ಮನೆತನಗಳ ಅರಸುಗಳು ಮತ್ತು ಪಾಶ್ಚಾತ್ಯ ಆಕ್ರಮಣಕಾರರು ಹೊರಡಿಸಿದಂಥವು. ಅವನ್ನು ಬರೆಯುವಲ್ಲಿ ತಮಿಳು, ಮಲಯಾಳಂ, ಸಂಸ್ಕøತ, ಕನ್ನಡ, ತೆಲುಗು, ತುಳು, ಅರಬ್ಬೀ, ಡಚ್, ಇಂಗ್ಲೀಷ್‍ಗಳನ್ನೂ ತಮಿಳು, ವಟ್ಟೆಳುತ್ತು, ಮಲಯಾಳಂ ಕೋಲೆಳುತ್ತು, ನಾಗರೀ, ಗ್ರಂಥ, ಕನ್ನಡ, ತೆಲುಗು, ತುಳು, ಅರಬ್ಬೀ, ರೋಮನ್ ಲಿಪಿಗಳನ್ನೂ ಬಳಸಲಾಗಿದೆ. ಹೀಬ್ರು, ಪಹ್ಲವಿ, ಗ್ರೀಕ್, ಸಿರಿಯಾಕ್ ಲ್ಯಾಟಿನ್ ಶಾಸನಗಳೂ ಕೇರಳದಲ್ಲಿ ದೊರೆತಿವೆ.

	ಕೇರಳದ ಶಾಸನಗಳಲ್ಲಿ ತೇದಿಯ ವಿವರಗಳನ್ನು ನೀಡುವಲ್ಲಿ ಶಕ, ಕಲಿಯುಗ, ಕೋಲಂಬ ಅಥವಾ ಕೊಲ್ಲಂ, ಕ್ರಿಸ್ತಶಕ ಅಥವಾ ಮಿಶಿಯ ಮತ್ತು ಪುದುವೈಪ್ಪು ಸಂವತ್ಸರಗಳನ್ನೂ ಹಲವು ಅರಸುಗಳ ರಾಜ್ಯಸಂವತ್ಸರಗಳನ್ನೂ ಅವಲಂಬಿಸಲಾಗಿದೆ. ಅಲ್ಲದೆ ಅನೇಕ ಶಾಸನಗಳಲ್ಲಿ ಗ್ರಹಗಳ ನೆಲೆಯ, ಗತಿಯ ಆಧಾರದ ಮೇಲೂ ತೇದಿಯ ವಿವರಗಳನ್ನು ಕೊಡಲಾಗಿದೆ. ತಿಂಗಳುಗಳನ್ನು ಪ್ರಸ್ತಾಪಿಸುವಲ್ಲಿ ಮೊದಲು ಬಳಕೆಯಲ್ಲಿದ್ದ ಚಾಂದ್ರಮಾನ ಪದ್ಧತಿ ಕಾಲಕ್ರಮದಲ್ಲಿ ಸೌರಮಾನಕ್ಕೆ ಎಡೆಕೊಟ್ಟಿರುವುದನ್ನೂ ಇವುಗಳಲ್ಲಿ ಕಾಣಬಹುದು.

	ಕೇರಳದ 9ನೆಯ ಶತಮಾನದವರೆಗಿನ ಇತಿಹಾಸಕ್ಕೆ ಸಂಬಂಧಿಸಿದಂತೆ ಕೇರಳದಲ್ಲೆ ದೊರೆಯುವ ಶಾಸನಗಳ ಸಂಖ್ಯೆ ಬಹಳ ಕಡಿಮೆ. ಮಲಬಾರ್ ಪ್ರಾಂತ್ಯದ ವೈನಾಡಿನಲ್ಲಿ, ಸುಲ್ತಾನ್ ಬತೇರಿಯ ನೈಋತ್ಯಕ್ಕಿರುವ ಎಡಕಲ್ ಗುಡ್ಡದ ಗುಹೆಯ ಗೋಡೆಗಳ ಮೇಲಿನ ಸೂರ್ಯ, ಅಗ್ನಿ, ಮಾನವ, ಮೃಗರೂಪದ ಕೆರೆದ ಚಿತ್ರಗಳು ಕ್ರಿಸ್ತಶಕದ ಪ್ರಾರಂಭಕಾಲದವೆಂದು ವಿದ್ವಾಂಸರು ಊಹಿಸಿದ್ದಾರೆ. ಅದೇ ಗುಹೆಯ ಗೋಡೆಯ ಮೇಲೆ ಕೊರೆದಿರುವ ಒಂದೊಂದು ಪಂಕ್ತಿಯ ನಾಲ್ಕು ಬರೆಹಗಳೂ ಲಿಪಿಶಾಸ್ತ್ರ ದೃಷ್ಟಿಯಿಂದ ಕ್ರಿ.ಶ. 3-5ನೆಯ ಶತಮಾನಗಳಿಗೆ ಸೇರಿದವು. ಕೇರಳದಲ್ಲಿ ಇದುವರೆಗೆ ದೊರೆತಿರುವ ಶಾಸನಗಳಲ್ಲಿ ಇವು ಪ್ರಾಚೀನತಮವಾದವು. ಮಲಬಾರಿನ ಎರ್ನಾಡ್ ತಾಲ್ಲೂಕಿನ ನಿಲಾಂಬೂರಿನಲ್ಲಿ ದೊರೆತ ಬನವಾಸಿಯ ಕದಂಬ ಅರಸು ರವಿವರ್ಮನ ತಾಮ್ರಶಾಸನ 5ನೆಯ ಶತಮಾನದ್ದಾಗಿದೆ.

	9-15ನೆಯ ಶತಮಾನಗಳಿಗೆ ಸಂಬಂಧಿಸಿದಂತೆ ಕೇರಳದಲ್ಲಿ ನೂರಾರು ಶಾಸನಗಳು ದೊರೆತಿವೆ. ಕೇರಳದ ಅಧಿಕೃತ ಭಾಷೆಯಾಗಿರುವ ಮಲಯಾಳದ ಶಾಸನಗಳು 14ನೆಯ ಶತಮಾನದಿಂದ ಮಾತ್ರ ಕಾಣಿಸಿಕೊಂಡರೂ 12-13ನೆಯ ಶತಮಾನಗಳ ತಮಿಳು ಶಾಸನಗಳಲ್ಲೂ ಮಲಯಾಳದ ಪ್ರಭಾವ ಎದ್ದು ಕಾಣುತ್ತದೆ. 9ನೆಯ ಶತಮಾನದಿಂದ ಕೇರಳದ ಹಲವು ಶಾಸನಗಳಲ್ಲಿ ಬಳಸಲಾಗಿರುವ ವಟ್ಟೆಳುತ್ತು ಲಿಪಿ 17ನೆಯ ಶತಮಾನದವರೆಗೂ ಅನಿಯೋಜಿತವಾಗಿ ಶಾಸನಗಳಲ್ಲಿ ಬಳಕೆಯಲ್ಲಿದ್ದರೂ 15ನೆಯ ಶತಮಾನದಿಂದ ಮಲಯಾಳ ಲಿಪಿಯ ಪ್ರಭಾವವೇ ಹೆಚ್ಚಿತು.

	ಈ ಕಾಲದ ಶಾಸನಗಳಲ್ಲಿ ಕೆಳಗಿನವು ಗಮನಾರ್ಹ: ತಮಿಳು ಮತ್ತು ಸಂಸ್ಕøತ ಭಾಷೆ ಹಾಗೂ ತಮಿಳು ಮತ್ತು ಪ್ರಾಚೀನ ನಾಗರೀ ಲಿಪಿಗಳಲ್ಲಿರುವ, 9ನೆಯ ಶತಮಾನದಲ್ಲಿ ಹುಟ್ಟಿದ ವೃಷ್ಣಿಕುಲದ ಅರಸು ವರಗುಣನ ಪಾಲಿಯಂ ತಾಮ್ರ ಶಾಸನ; ಸ್ಥಾಣುರವಿಯ ಆಳ್ವಿಕೆಯ ಐದನೆಯ ವರ್ಷದಲ್ಲಿ ಕ್ರೈಸ್ತಧರ್ಮದ ಈಶೋತಪೀರ್ ಎಂಬಾತ ನಿರ್ಮಿಸಿದ ತರಿಶಾಪ್ಪಳ್ಳಿ (ಸಂತ ತರೇಸಾ) ಇಗರ್ಜಿಗೆ ವೇಣಾಡಿನ ದೊರೆ ಅಯ್ಯನಡಿಗಳ್ ಹಲವು ಕುಟುಂಬಗಳನ್ನು ಒಪ್ಪಿಸಿ ಕೊಟ್ಟ ವಿವರಗಳನ್ನು ನೀಡುವ 9ನೆಯ ಶತಮಾನದ ತಾಮ್ರಶಾಸನ; ಇಲ್ಲಿಯವರೆಗೆ ದೊರೆತಿರುವಂತೆ ಕೊಲ್ಲಂ ಸಂವತ್ಸರದ ಪ್ರಾಚೀನತಮ ಉಲ್ಲೇಖವಿರುವ ಕೊಲ್ಲಂ 149 (ಕ್ರಿ.ಶ. 973) ಮಾಂಪಳ್ಳಿ ತಾಮ್ರ ಶಾಸನ; ಕೇರಳದ ರಾಜಕೀಯ ಮತ್ತು ಸಾಮಾಜಿಕ ಜೀವನದ ಬಗೆಗೆ ಕುತೂಹಲಕಾರಿ ಅಂಶಗಳನ್ನೊಳಗೊಂಡ, ವೆಳ್ಳಾಯಣೆ ಶಿಲಾಶಾಸನ (1196), ವೇಣಾಡಿನ ಅರಸು ರವಿಕೇರಳವರ್ಮನ ಆಳ್ವಿಕೆಯಲ್ಲಿ ಜಾರಿಗೆ ತರಲಾದ ಭೂಕಂದಾಯ ವ್ಯವಸ್ಥೆಯ ವಿವರಗಳನ್ನು ನೀಡುವ ಮಣಲಿಕ್ಕರೈ ಶಿಲಾಶಾಸನ (1236) ಮಲಯಾಳ ಭಾಷೆ ಮತ್ತು ವಟ್ಟೆಳುತ್ತು ಲಿಪಿಯ, ಅತ್ತಿಂಗಲ್ ಶಿಲಾಶಾಸನ (1452).

	15ನೆಯ ಶತಮಾನದ ಕೊನೆಯಲ್ಲಿ ಪಾಶ್ಚಾತ್ಯರು ವಲಸೆ ಬಂದ ಅನಂತರದ ಕೇರಳದ ಇತಿಹಾಸವನ್ನು ಪುನರ್ರಚಿಸುವ ಶಾಸನೇತರ ದಾಖಲೆಗಳು ಹೆಚ್ಚು ಸಹಾಯ ನೀಡುತ್ತವೆಯಾಗಿ ಆ ಕಾಲದ ಶಾಸನಗಳು ತಮ್ಮ ಮಹತ್ತ್ವವನ್ನು ಕಳೆದುಕೊಂಡಿವೆ. ಆಧುನಿಕ ಶಾಸನಗಳಲ್ಲಿ ಕೊಚ್ಚಿಯ ಸಂಸ್ಥಾನಕ್ಕೂ ಡಚ್ಚರಿಗೂ ನಡುವೆ ಮಾಡಿಕೊಳ್ಳಲಾಗಿದ್ದ ಒಪ್ಪಂದದ ವಿವರಗಳನ್ನು ನೀಡುವ ತಾಮ್ರಶಾಸನಗಳು (ಕ್ರಿ.ಶ. 1662) ಉಲ್ಲೇಖಾರ್ಹವಾಗಿವೆ. ತೇದಿಯ ವಿವರಗಳನ್ನು ಕೊಡುವಲ್ಲಿ ಈ ಶಾಸನದಲ್ಲಿ ಪುದುವೈಪ್ಪು ಸಂವತ್ಸರದ 322ನೆಯ ವರ್ಷವನ್ನೂ ಪ್ರಸ್ತಾಪಿಸಲಾಗಿದೆ. ಕೊಚ್ಚಿಯ ಉತ್ತರಕ್ಕೆ, ಪಶ್ಚಿಮದ ಸಮುದ್ರದಲ್ಲಿ 1342ರಲ್ಲಿ ಸಣ್ಣ ದ್ವೀಪವೊಂದು ತಾನೇ ತಾನಾಗಿ ಹೊರಬಂತು. ಆ ದ್ವೀಪದ ಹೆಸರು ಬಿಪೀನ್ ಎಂದೂ ಆ ಘಟನೆಯ ಸ್ಮರಣಾರ್ಥವಾಗಿ ಘೋಷಿಸಲಾದ್ದೇ ಪುದುವೈಪ್ಪು ಸಂವತ್ಸರವೆಂದೂ ಗೊತ್ತಾಗುತ್ತದೆ.   				
 (ಕೆ.ವಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ